ದಾವಾನಲ ಧಾರಿಣಿ ಜಲ ಆಗಸ ಅನಿಲದಲಿ
ಮಾಯದ ಗಾಯದ ಮಣ್ಣಿನ ಕಾಯದ ಹಂಗಿನಲಿ
ಸಾರದ ಸೇರದ ಎಂದೂ ಆರದ ಘನ ತರಣಿ
ಇರುಳಾಳುವ ಮನದಾಳಕೆ ಸುರಿ ಕಿರಣವ ಕರುಣಿ
ಎದೆಯಾಳದಿ ಎವತೆರದಿವೆ ಗತಭವಗಳು ಹೊರಳಿ
ಎಂದಿನ ಸ್ಮರಣೆಯ ಅರಣಿಯೊ ಹೊಗೆಯಾಡಿದೆ ನರಳಿ,
ಮೆಲೇಳುವ ಬಿಳಿ ಧೂಮದ ಜಾಲದ ಹಂಗಿನಲಿ
ಎಡವಿದೆ ಮತಿ ವಾದದ ಗತಿ, ಸುಳಿ ಬಿಚ್ಚಿದೆ ಕದಳಿ.
ಗಿರಿಹುತ್ತದ ತುಡಿಗೆತ್ತಿದ ದಿಙ್ನಾಗರ ಭೋಗ
ಸೆಳೆಯುತ್ತಿದೆ ಅಳೆಯುತ್ತಿದೆ ಅನುರಾಗದ ಆಳ
ಕರೆಯುತ್ತಿದೆ “ಬಾರೇ ಬಾ ನೀರೇ ನಿಧಿ ಸಾರೇ
ಇಡಿಚಿತ್ತದ ಮಧುಭಾಂಡದಿ ಏನೇನಿದೇ ತಾರೇ”
ಗಣಿಯಾಳದ ಜಲ ಮೇಲಕೆ ಜುಳು ಜುಳು ಜುಳು ಹರಿದು
ಯೋಗದ ಕಡಲಿಗೆ ಎಚ್ಚರ ನಿದ್ದೆಯ ತೊರೆ ನೆರೆದು
ಸಾಗುವ ಡೊಂಕಿನಲಾಗಲಿ ತೂಗಾಟದ ರಾಗ
ಹಾಲಿನ ಹರವಿಯ ಸಿಡಿಸುವ ಬೃಂದಾವನ ಭೋಗ.
ಮಾಗಿಯ ರಾತ್ರಿಯ ಮಂಜಿನ ಮಬ್ಬಿನ ತೆರೆ ಸರಿದು
ಕಾಣದ ನಿಜವಿಶ್ವದ ಹೊಸದರ್ಶನಗಳು ತೆರೆದು
ಸಾವಿರದಾ ನವವಸಂತ ಮಾವಿನ ಹರೆಯೇರಿ
ಕೂಗುವ ಕೋಗಿಲೆಯಾಗಲಿ ಜೀವವು ತೇಷೆಯಾರಿ.
*****